ಶಂ.ಬಾ.ಜೋಶಿ : -
(1896-1991). ಕ್ರಿ. ಶ. 1896ರ ಜನವರಿ, 4ರಂದು ಬೆಳಗಾವಿ ಜಿಲ್ಲೆಯ ಗುರ್ಲಹೊಸೂರು (ಗುರುಗಳ ಹೊಸೂರು) ಗ್ರಾಮದ ಕರ್ಮಠ ಮನೆತನದಲ್ಲಿ ಜನಿಸಿದ ಡಾ|| ಶಂಕರ ಬಾಳದೀಕ್ಷಿತ ಜೋಶಿಯವರು ಸಂಪೂರ್ಣ ಸ್ವತಂತ್ರವಾದಿಗಳಾಗಿ, ಬಂಡಾಯದ ವಿಚಾರವಾದಿಗಳಾಗಿ ಸಂಸ್ಕøತಿ ಮತ್ತು ಭಾಷೆಗಳ ಅನ್ಯೋನ್ಯತೆಯ ಹಿನ್ನೆಲೆಯಲ್ಲಿ ತಮ್ಮ ಬರವಣಿಗೆ ಸ್ವರೂಪವನ್ನು ಗ್ರಹಿಸಿಕೊಂಡು ಬರೆದ ಮಹತ್ವದ ಪಂಡಿತರಲ್ಲಿ ಶಂಬಾ ಅವರು ಮೊತ್ತ ಮೊದಲಿಗರು. ವೈದಿಕ ಪರಂಪರೆಯವರು ಇಂಗ್ಲಿಷ್ ಕಲಿತರೆ ಕೇಡು ಅನ್ನುವ ಪರಿಸ್ಥಿತಿ ಜೊತೆಗೆ ಕಿತ್ತು ತಿನ್ನುವ ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣಕ್ಕೆ ಓದನ್ನು ನಿಲ್ಲಿಸಬೇಕಾಯಿತು. 24ನೇ ವಯಸ್ಸಿನಲ್ಲಿ ಎ.ಬಿ.ಸಿ.ಡಿ. ಕಲಿತು ಕಾಲ್ಡ್‍ವೆಲ್, ರಸೆಲ್‍ರಂತಹವರ ಆಂಗ್ಲಕೃತಿಗಳನ್ನು ವಿಶ್ಲೇಷಿಸುವಷ್ಟು ವಿದ್ವತ್ ಸಂಪಾದಿಸಿ ಪ್ರಾಥಮಿಕ ಶಾಲಾ ಉಪಾಧ್ಯಾಯರಾಗಿ ವೃತ್ತಿ ಪ್ರಾರಂಭಿಸಿದರು.

	ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಜೀವನ ನಿರ್ವಹಣೆಗೆ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡು ತಮ್ಮ ಲೇಖನಿಯ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು. ಧಾರವಾಡದ ಗೆಳೆಯರ ಗುಂಪಿನ ಸ್ಥಾಪಕರಲ್ಲೊಬ್ಬರಾದ ಶಂಬಾ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರು. ಕರ್ನಾಟಕ ಏಕೀಕರಣ ಆಂದೋಲನದಲ್ಲೂ ತೊಡಗಿಸಿಕೊಂಡವರು. ತಮ್ಮ ಸ್ವಂತ ಪರಿಶ್ರಮದಿಂದ ಕನ್ನಡದ ಜೊತೆಗೆ, ಸಂಸ್ಕøತ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಕಲಿತು ಆಳವಾದ ಪಾಂಡಿತ್ಯವನ್ನು ಗಳಿಸಿಕೊಂಡಿದ್ದರು. ನಮ್ಮ ವಿದ್ವತ್ ವಲಯದಲ್ಲಿ ಪಾಶ್ಚಾತ್ಯ ವಿದ್ವಾಂಸರ ವಿಧಿವಿಧಾನಗಳೇ ಮಾದರಿಯಾಗಿದ್ದ ಸಂದರ್ಭದಲ್ಲಿ ಶಂಬಾ ತಮ್ಮದೇ ಆದ ಸಂಶೋಧನ ವಿಧಾನವನ್ನು ರೂಪಿಸಿಕೊಂಡು, ಭಾಷೆ, ಸಂಸ್ಕøತಿ, ಸಮಾಜ ವಿಜ್ಞಾನ, ಇತಿಹಾಸಗಳ ಅಧ್ಯಯನಕ್ಕೆ ಹೊಸ ದೃಷ್ಟಿಕೋನ ತಂದು ಕೊಟ್ಟರು. ಇದರಿಂದಲೇ ಶಂಬಾ ಅವರನ್ನು ಎಚ್.ಎಲ್. ನಾಗೇಗೌಡರು ಕನ್ನಡದ ಕೊಲಂಬಸ್ ಎಂದಿದ್ದಾರೆ.

	ಡಾ|| ಶಂಬಾ ಅವರ ಸಂಶೋಧನೆ, ಸಂಸ್ಕøತಿ ಅನ್ವೇಷಣೆ ವಿವಿಧ ರೀತಿಯದು. ಕಣ್ಮರೆಯಾದ ಕನ್ನಡ (1933), ಮಹಾರಾಷ್ಟ್ರದ ಮೂಲ (1934), ಕನ್ನಡದ ನೆಲೆ (1939) ಇವು ಪ್ರಾಚೀನ ಕರ್ನಾಟಕದ ವಿಸ್ತಾರಕ್ಕೆ ಆಧಾರಗಳನ್ನೊದಗಿಸುವ ಅಪೂರ್ವ ಗ್ರಂಥಗಳಾಗಿವೆ. ಕಂನುಡಿಯ ಹುಟ್ಟು ಅಥವಾ ವಿರುಕ್ತ (1937), ಎಡೆಗಳು ಹೇಳುವ ಕಂನಾಡ ಕತೆ (1947) ಕನ್ನಡ ನುಡಿಯ ಜೀವಾಳ (1950) ಕನ್ನಡ ಭಾಷೆಯ ಪ್ರಾಚೀನತೆ, ಅನನ್ಯತೆಗಳನ್ನು ಸಾದರ ಪಡಿಸುವ ಗ್ರಂಥಗಳಾಗಿವೆ ಎಡೆಗಳು ಹೇಳುವ ಕಂನಾಡಕತೆ ಕನ್ನಡದ ಮೊದಲ ಸ್ಥಳನಾಮ ಅಧ್ಯಯನ ಗ್ರಂಥ ಎಂಬುದು ದಾಖಾಲಾರ್ಹ.

	ಧರ್ಮ, ಸಂಸ್ಕøತಿ, ತತ್ವಜ್ಞಾನ ಇವುಗಳ ಆಳವಾದ ಚಿಂತನೆಯಿಂದ ಭಾರತೀಯ ಸಂಸ್ಕøತಿಯಲ್ಲಿನ ಆಷಾಡಭೂತಿತನವನ್ನು ಬಯಲುಗೊಳಿಸುವ ಮೂಲಕ ಹಲವರ ನಂಬಿಕೆಗಳನ್ನು ತಲ್ಲಣಗೊಳಿಸಿದರು ಈ ನಿಟ್ಟಿನಲ್ಲಿ ಅವರು ಬರೆದ ಬೃಹತ್ ಕೃತಿಗಳಲ್ಲಿ ಕರ್ನಾಟಕ ಸಂಸ್ಕøತಿಯ ಪೂರ್ವಪೀಠಿಕೆ (1960), ಶಿವರಹಸ್ಯ (1939), ಹಾಲುಮತದರ್ಶನ (1960) ಋಗ್ವೇದ ಸಾರ - ನಾಗಪ್ರತಿಮಾ ವಿಚಾರ (1971), ಪ್ರವಾಹ ಪತಿತನ ಕರ್ಮ-ಹಿಂದೂ ಎಂಬ ಧರ್ಮ (1976), ಶ್ರೀಮತ್ ಭಗದ್ಗೀತೆಯಲ್ಲಿ ಹುದುಗಿರುವ ರಾಜಯೋಗದ ಸ್ವರೂಪ (1977) ವೈವಸ್ವತ ಮನು ಪ್ರಣೀತ ಮನವ ಧರ್ಮದ ಆಕೃತಿ (1979), ಬುಧನ ಜಾತಕ (1980) ಮತ್ತು ಬಿತ್ತಿದ್ದನ್ನು ಬೆಳಕೊ (1984) ಮುಖ್ಯವಾದವು. ಋಗ್ವೇದ ಸಾರವಂತೂ ಸಾವಿರ ಪುಟಗಳನ್ನು ಮೀರಿದ ಬೃಹತ್‍ಗ್ರಂಥ.

	ಈ ಗ್ರಂಥಗಳಲ್ಲಿ ಶಂಬಾ ಭಾರತೀಯ ಸಂಸ್ಕøತಿಯ ಮೂಲ ಸ್ವರೂಪವನ್ನು ಕಾಣಲು, ಸತ್ಯವನ್ನು ಸರಿಯಾಗಿ ಗ್ರಹಿಸಲು ತೀವ್ರ ಅನ್ವೇಷಣೆ ನಡೆಸಿದ್ದಾರೆ. ಸೂರ್ಯ (ವಿಶ್ವಾಮಿತ್ರ), ಚಂದ್ರ (ವಸಿಷ್ಠ) ಸಂಪ್ರದಾಯಗಳು ತೀರ ಸಂಕೀರ್ಣವಾದದ್ದೆಂದು ಹೇಳಿ ಮಾನವ ಪ್ರಜ್ಞೆ ಅತ್ಯಂತ ಮಹತ್ವದ್ದು. ನಾವು ಆರಾಧಿಸುತ್ತಿರುವ ದೇವತೆಗಳು ಚಂದ್ರ (ರಾತ್ರಿ) ಪತಳಿಯದಾಗಿದ್ದು ಅವು ಸಂಕೇತಿಸುವ ಜೀವನಾದರ್ಶಗಳು ಅವನತಿಯ ಸೂಚಕವಾಗಿದೆ ಎಂದು ಹೇಳಿ. ಇಂಥ ಆರಾಧನೆಯಿಂದ ನಾವು ಅಧೋಗತಿಯತ್ತ ಜಾರುತ್ತೇವೆ ಇದು ತಪ್ಪಿ ನಾವು ಮತ್ತೆ ವಿಶ್ವನರಾಗ್ನಿ ಸೂರ್ಯ (ಬೆಳಕು)ನ ಆರಾಧಕರಾಗಿ ಮೇಲೇಳಬೇಕಿದೆ ಎನ್ನುತ್ತಾರೆ. ಇದರ ಜೊತೆಗೆ ಸಾಮಾಜಿಕ ಮೌಲ್ಯದ, ನೈತಿಕತೆಯ ಅಧಃಪತನವನ್ನು ಯಕ್ಷ ಪ್ರಶ್ನೆ ಅಥವಾ ಬರಲಿರುವ ಸಮಾಜ (1948), ಸಮಾಜ ದರ್ಶನ (1949) ಎಂಬ ಕೃತಿಗಳಲ್ಲಿ ಬಿಂಬಿಸುತ್ತಾರೆ.

	ಶಂಬಾ ಅವರು ವಿದ್ವತ್ ಕೃತಿಯನ್ನು ಬರೆದಂತೆ ದಾರಿಯ ಬುತ್ತಿಯಂತಹ ಸಾಮಾನ್ಯರು ಅನುಸರಿಸಬಹುದಾದಂತಹ ಸಂಗತಿಗಳನ್ನೊಳಗೊಂಡ ಕೃತಿ ರಚಿಸಿದರು. ಇವರ ಕರ್ಣನ ಮೂರು ಚಿತ್ರಗಳು ಮುಂತಾದ ಪ್ರಬಂಧಗಳು, ಅರವಿಂದ ಚರಿತೆ (1920) ಉಪನಿಷದ್ರಹಸ್ಯ (ಅನುವಾದ 1928), ಟಿಳಕ ಕಥಾಮೃತಸಾರ (1930) ಇವುಗಳು ಶಂಬಾ ಅವರ ಗದ್ಯ ಸಾಹಿತ್ಯದ ಪ್ರೌಢಿಮೆಗೆ ಸಾಕ್ಷಿಯಾಗಿದೆ. ಇವರು ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆಂಬುದು ಉಲ್ಲೇಖನೀಯ.

	ಕನ್ನಡ ಕ್ರಿಯಾ ಪದಗಳು ಮರಾಠಿಗೆ ಹೋಗಿರುವುದನ್ನು ಅವರು ಗುರುತಿಸಿದ್ದಾರೆ. ನಾಮಪದ ವಿಶೇಷಣಗಳನ್ನು ಬೇರೆ ಭಾಷೆಗಳಿಂದ ಎರವಲಾಗಿ ತರಬಹುದೆ ಹೊರತು ಕ್ರಿಯಾಪದಗಳನ್ನಲ್ಲಾ ಎಂಬ ಶಂಬಾ ನಿರ್ಣಯ ಮಹತ್ವದ್ದು. ಕರ್ನಾಟಕದಾಚೆಗೆ ಕನ್ನಡ ಸಂಸ್ಕøತಿಯ ಹಿರಿಮೆಯನ್ನು ಸಾರಿದ ಮೊದಲಿಗರು ಶಂಬಾ. ಏಕೀಕರಣದ ಕಾಲದಲ್ಲಿಯೆ ಮಹಾರಾಷ್ಟ್ರದ ಮೂಲದಲ್ಲಿರುವುದು ಕನ್ನಡ ಸಂಸ್ಕøತಿಯೆ ಎಂದು ಮರಾಠಿಯಲ್ಲಿಯೇ ಗ್ರಂಥ ಬರೆದು (ಮಹಾರಾಷ್ಟ್ರದ ಮೂಲ) ದೊಡ್ಡ ವಿವಾದ ಸೃಷ್ಟಿಸಿದರು. ಈ ಕೃತಿ ಮಹಾರಾಷ್ಟ್ರದ ವರ್ಷದ ಅತ್ಯುತ್ತಮ ಕೃತಿ ಎಂದು ಮಹಾರಾಷ್ಟ್ರ ಸರ್ಕಾರ ಮಾನ್ಯಮಾಡಿತು. ಮರಾಠಿ ಮಹಾಪಂಡಿತ ತರ್ಕತೀರ್ಥ ಲಕ್ಷ್ಮಣ ಶಾಸ್ತ್ರಿ ಜೋಶಿ, ಆಚಾರ್ಯ ವಿನೋಬಾ ಬಾವೆ ಅವರಿಂದ ಪ್ರಶಂಸೆಗಳಿಸಿದ್ದು ಸಾಮಾನ್ಯ ಸಂಗತಿಯಲ್ಲ.

	ಪ್ರಸಿದ್ಧ ವಿದ್ವಾಂಸರಾಗಿದ್ದಂತೆಯೇ ಶಂಬಾ ಅವರು ಕನ್ನಡದ ಕಟ್ಟಾಳು ಕೂಡ ಆಗಿದ್ದರು. 1924ರಲ್ಲಿ ಕರ್ನಾಟಕ ಏಕೀಕರಣಕ್ಕೆ ಬೆಳಗಾವಿಯಲ್ಲಿ ನಡೆದ ಸಮಾವೇಶವನ್ನು ಸಂಘಟಿಸಿದ ಸಮಿತಿಯ ಕಾರ್ಯದರ್ಶಿಯಾಗಿದ್ದರು. 1982ರಲ್ಲಿ ನಡೆದ ಗೋಕಾಕ್ ಚಳವಳಿಯಲ್ಲಿ ಅಂದರೆ ತಮ್ಮ 87ನೇ ವಯಸ್ಸಿನಲ್ಲಿ ಗೋಕಾಕ್ ಭಾಷಾ ಸೂತ್ರದ ಅನುಷ್ಠಾನಕ್ಕೆ ಒತ್ತಾಯಿಸಿ ಉಪವಾಸ ನಡೆಸಿದವರು ಅವರು. ಆ ಸಂದರ್ಭದಲ್ಲಿ ಧಾರವಾಡದಲ್ಲಿ ರೂಪುಗೊಂಡ ಅಖಿಲ ಕರ್ನಾಟಕ ಕನ್ನಡ ಕ್ರಿಯಾ ಸಮಿತಿಯ ಮೊದಲ ಅಧ್ಯಕ್ಷರೂ ಶಂಬಾ ಜೋಶಿ ಅಂದರ ಅವರ ನಾಡು-ನುಡಿ ಅಭಿಮಾನ ಎಂತಹದು ಎಂದು ತಿಳಿಯುತ್ತದೆ. 1924ರಿಂದ 1991ರವರೆಗೆ ಅಂದರೆ ಅವರ ಅಂತಿಮ ಕ್ಷಣದವರೆಗೆ (ಸುಮಾರು 6 ದಶಕಗಳು) ಕನ್ನಡ ಜಾಗೃತಿಯಲ್ಲಿ ತೊಡಗಿಸಿಕೊಂಡವರು ಶಂಬಾ ಒಬ್ಬರೇ.

	ಶಂಬಾ ಜೋಶಿಯವರಿಗೆ ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ 1967ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ ನೀಡಿದೆ. ಇವರ ಕರ್ನಾಟಕ ಸಂಸ್ಕøತಿಯ ಪೂರ್ವ ಪೀಠಿಕೆಗೆ 1970ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. 1986ರ ರಾಜ್ಯೋತ್ಸವ ಪ್ರಶಸ್ತಿ, ಮಡಕೇರಿಯಲ್ಲಿ ನಡೆದ ಅಖಿಲ ಭಾರತ 54ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗಳು ಇವರಿಗೆ ಸಂದಿರುವ ಗೌರವಗಳಲ್ಲಿ ಮಹತ್ವದ್ದಾಗಿವೆ. ವಿಶ್ವವಿದ್ಯಾನಿಲಯದ ಮೆಟ್ಟಲು ಹತ್ತದ ಶಂಬಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು 1973ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.

	ಹೀಗೆ ಹಲವು ಸ್ತರಗಳಲ್ಲಿ ನಾಡು-ನುಡಿಯ ಒಟ್ಟು ಮಾನವನ ಉತ್ಕರ್ಷಕ್ಕೆ ಅಹರ್ನಿಶಿ ದುಡಿದ ಶಂಬಾ 28-9-1991 ರಂದು ತಮ್ಮ ತೊಂಬತ್ತಾರನೆಯ ವಯಸ್ಸಿನಲ್ಲಿ ನಿಧನರಾದರು.  

	ಈಗ ಸಂಗ್ರಹವಾಗಿ ಶಂ. ಬಾ. ಜೋಶಿ ಅವರ ಸಂಶೋಧನೆಗಳ ಸಾರವನ್ನು ಇಲ್ಲಿ ಉಲ್ಲೇಖಿಸಬಹುದು :
	 1. ಕನ್, ಕನ್ನ, ಕಣ್ವ, ಪಟ್ಟಿ, ಹಟ್ಟಿ, ಹಟ್ಟ ಮುಂತಾದ ನಾಮಾಂಗಗಳು ದ್ವಾರಕಾ ಹಾಗೂ ನರ್ಮದಾ ತೀರದ ವರೆಗಿನ ಪ್ರದೇಶ ಹಾಗೂ ಸ್ಥಲನಾಮಗಳಲ್ಲಿ ಕಾಣಸಿಗುತ್ತವೆ. ಆದುದರಿಂದ ವೇದಪೂರ್ವ ಪ್ರಾಗೈತಿಹಾಸಿಕ ಕಾಲದಲ್ಲಿ ಕನ್ನಡಿಗರ ವ್ಯಾಪ್ತಿ ಸಿಂಧೂ - ಗಂಗಾ ತೀರಗಳಿಂದ ಕ್ರಮಕ್ರಮವಾಗಿ ನರ್ಮದಾ ತೀರದವರೆಗೂ ಮುಂದೆ ಐತಿಹಾಸಿಕ ಕಾಲದಲ್ಲಿ ಗೋದಾವರಿ ಮತ್ತು ಕೃಷ್ಣಾ ತೀರಕ್ಕೂ ಸಂಕುಚಿತವಾಗುತ್ತ ಹೋಗಿರಬೇಕು.

	 2. ಮರಾಠಿ ಶಬ್ದ ಪ್ರಾಚೀನ ಕಾಲದಲ್ಲಿಲ್ಲ. ಅದರ ಮೂಲರೂಪ ಮರಹಟ್ಟ : ವರ್ಹಾಟ ಎಂದೇ. ಮರಹಟ್ಟ ಎಂದರೂ ಮರದವ್ವನನ್ನು ಪೂಜಿಸುವ ಹಟ್ಟಿಕಾರ ಕನ್ನಡಿಗರೆಂದೇ ಅರ್ಥ. ಹೀಗೆ ವೇದಕಾಲದಲ್ಲಿ ಈಗಿನ ಮಹಾರಾಷ್ಟ್ರ ಹಾಗೂ ಕರ್ನಾಟಕ ಪ್ರದೇಶಗಳ ಮೂಲನಿವಾಸಿಗಳೆಲ್ಲ ಕನ್ನಡಿಗರೇ ಆಗಿದ್ದಿರಬೇಕು. ಇವರು ಆರ್ಯ ಭಿನ್ನ ದ್ರಾವಿಡ ಜನಾಂಗಕ್ಕೆ ಸೇರಿದವರು. ಇವರಂತೆಯೇ ಆಂಧ್ರ ಅಥವಾ ತ್ರಿಲಿಂಗ ಪ್ರವೇಶದ ಮೂಲನಿವಾಸಿಗಳಾದರು.
 3. ಇವರ ಸಂಸ್ಕøತಿಯ ಮೂಲ ಸ್ವರೂಪದಲ್ಲಿ ಪಶುಪಾಲನೆ, ಹತ್ತಿಯಿಂದ ಬಟ್ಟೆಗಳ ನೇಯ್ಗೆ, ಗೋಪೂಜೆ, ಬೆಟ್ಟದ ದೇವರಾದ ಶಿವ ಹಾಗೂ ಸ್ತ್ರೀದೇವತೆಗಳ ಪೂಜೆ, ಹಾಲುಮತ, ಚಂದ್ರಸಂಕೇತ, ಮುನಿ-ಸಂಪ್ರದಾಯ, ನಿವೃತ್ತಿಮಾರ್ಗ-ಇತ್ಯಾದಿಗಳು ವೈಶಿಷ್ಟಗಳು. ಇದಕ್ಕೆ ಭಿನ್ನವಾಗಿ ಆರ್ಯ-ಸಂಸ್ಕøತಿಯ ಉಣ್ಣೆಯ ಉಡುಗೆ, ಕುದುರೆಯ ಬಳಕೆ, ಸೂರ್ಯರ ಉಪಾಸನೆ, ಋಷಿ-ಸಂಪ್ರದಾಯ, ಪ್ರವೃತ್ತಿಮಾರ್ಗ, ಇತ್ಯಾದಿಗಳು ಪ್ರಧಾನ.

	 4. ಆರ್ಯೇತರ ಸಂಸ್ಕøತಿಗಳಲ್ಲಿ ಒಂದನ್ನು ದ್ರಾವಿಡ, ಇನ್ನೊಂದನ್ನು ಆಸ್ಟ್ರೋ-ಏಷ್ಯಾಟಿಕ್ ಎನ್ನುವುದು ಪಾಶ್ಚಾತ್ಯ ವಿದ್ವಾಂಸರ ರೂಢಿ. ಇದರಲ್ಲಿ ದ್ರಾವಿಡ ಶಬ್ದಕ್ಕಿಂತ ಕನ್ನಡವೆಂಬ ಶಬ್ದವೇ ಯುಕ್ತತರ. ನಾಗ ಸಂಪ್ರದಾಯ ಆಸ್ಟ್ರೋ-ಏಷಿಯನರ ಹೆಗ್ಗುರುತೆನ್ನಬಹುದು.

5. ಋಗ್ವೇದದಲ್ಲಿಯ ಕನ್ನಡ ಜನವರ್ಗದವರು ಭಾಷೆಯಲ್ಲಿನ ಪದಗಳು ರೂಪಾಂತರಗೊಂಡು ಸಂಸ್ಕøತದಲ್ಲಿ ಸೇರಿವೆ. ಉದಾ: ನೀರ, ಇಳಾ<ಇರಾ. ಹಾಗೆಯೇ ನಾಗ ಅಥವಾ ಸರ್ಪಸಂಕೇತಗಳೂ ಬೆರೆದುಹೋಗಿವೆ.

	6. ಭಾಷೆಯ ಮೂಲಧಾತುಗಳು, ಅವುಗಳಿಂದ ಹೊಸ ಹೊಸದಾಗಿ ಪ್ರತ್ಯಯಗಳನ್ನು ಸೇರಿಸಿ ಉಚಿತಾರ್ಥಕ್ಕೆ ಅನುಕೂಲಿಸುವ ನೂತನ ಶಬ್ದಗಳನ್ನು ನಿರ್ಮಿಸಿಕೊಳ್ಳುವ ಸಾಧ್ಯತೆ-ಇವುಗಳನ್ನು ಮನನ ಮಾಡದೆ ಭಾಷೆಯ ಶ್ರೀಮಂತಿಕೆ ಹೆಚ್ಚಲಾರದು.

7. ದೇವತಾರಹಸ್ಯಶಾಸ್ತ್ರದ ಅಭ್ಯಾಸದಿಂದ ಕೃಷ್ಣ-ವಿಟ್ಠಲರು ಕನ್ನಡಿಗರ ಇಷ್ಟದೇವತೆಗಳೆಂದು ತಿಳಿಯುತ್ತದೆ. ಕೃಷ್ಣ ಆರ್ಯೇತರ ವಿಟ್ಠಲ ವೇದ ಪೂರ್ವದ ದೇವತೆ. ಶಿವನಂತೂ ಕನ್ನಡದ ಕುಲದೈವವೇ, ಲಿಂಗಪೂಜೆಯ ಪ್ರತೀಕ ಲೈಂಗಿಕವೂ ಇರಬಹುದು. ವೇದದಲ್ಲಿ ರುದ್ರನ ಅನುಚರರೆನ್ನುವ ಮರುದ್ಗಣಗಳ ಸಂಖ್ಯೆ 63. ವೀರಶೈವದಲ್ಲಿ ಹೇಳುವ ಪುರಾತನರ ಸಂಖ್ಯೆಯೂ 63. ಹೀಗೆ ಶಿವರಹಸ್ಯವನ್ನು ಭೇದಿಸಲೂ ಕನ್ನಡ ಪುರಾತನ ಸಂಸ್ಕøತಿಯ ಅಭ್ಯಾಸದಿಂದ ಶಕ್ಯವಾಗುತ್ತದೆ. ಹನುಮಂತನೂ ಹದಿನಾರಾಣೆ ಕನ್ನಡ ಜನತಾ ದೇವತೆ, ಅವನೂ ಮರುತ್ತಿನ ಅಂಶವೇ.

8. ಹಾಲುಮತ ವೇದಪೂರ್ವಕಾಲದ ಭಾರತೀಯ ಸಂಪ್ರದಾಯದ ಅವಶೇಷ. ವೇದಗಳಲ್ಲಿ ಆಪ (ರಸ) ಸಂಕೇತದಿಂದ ಆಭಿವ್ಯಕ್ತವಾಗಿದೆ. ಅಗ್ನಿಪೂಜಕರ ಯಾಜಕ ಸಂಸ್ಕøತಿ ಪ್ರವೃತ್ತಿಪರ; ಆಪ (ರಸ) ತತ್ತ್ವದ ತಾಪಸಸಂಸ್ಕøತಿ ನಿವೃತ್ತಿಪರ. ಅಪ (ಮಧು-ರಸ) ಸಂಪ್ರದಾಯದ ದೇವತೆಗಳಾದ ರುದ್ರ, ವಿಷ್ಣುಗಳ ಉಲ್ಲೇಖ ಅವೆಸ್ತಾದಲ್ಲಿ ಇಲ್ಲ. ಆದ್ದರಿಂದ ಭಾರತೀಯ ಆರ್ಯರು ಇವರನ್ನು ಈ ದೇಶೀಯರಾದ ಇತರ ಜನಾಂಗಗಳಿಂದಲೇ ಸ್ವೀಕರಿಸಿರಬೇಕು. ಮುಂದಿನ ಶಾಕ್ತ-ಶೈವ-ವೈಷ್ಣವ ಸಂಪ್ರದಾಯಗಳಿಗೆಲ್ಲ ವೇದಪೂರ್ವ ಹಾಲುಮತವೇ ಮೂಲ. ಈ ಭಿನ್ನ ಮತ-ಪಂಥಗಳ ಸಮನ್ವಯದ ಪ್ರಯತ್ನಗಳು ಕೂಡ ಋಗ್ವೇದದಲ್ಲೇ ಇವೆ. ಪ್ರe್ಞÁ ಮತ್ತು ಮೇಧಾಗಳ ಸಮನ್ವಯವೇ ಅದು.

9. ಇಂದ್ರ-ವೃತ್ತರ ಹೋರಾಟವೇ ಋಗ್ವೇದದ ಪ್ರತಿಪಾದ್ಯ ವಿಷಯಗಳಲ್ಲಿ ಪ್ರಧಾನ, ಇಲ್ಲಿ ನಾಗಸಂಕೇತದ ಆವಿಷ್ಕಾರವಿದೆ. ಆದಿತಿಃ ಸಾಪರಾಜ್ಞೀ ಸೂರ್ಯೋವಾ ಎಂಬ ವೈದಿಕ ವಿವರಣೆಯಲ್ಲಿಯೇ ಪ್ರಾಗೈತಿಹಾಸಿಕ ಯುಗದ ಒಂದು ಬೃಹತ್ ಭಾವಕೋಶವೇ ಅಡಗಿದೆಯೆಂಬುದನ್ನು ಜೋಶಿಯವರು ಇಲ್ಲಿ ಆದ್ಭುತವಾದ ವೈದಿಕ ಶಬ್ದಾರ್ಥವಿವೇಚನಗಳ ಮೂಲಕ ಎತ್ತಿತೋರಿಸಿದ್ದಾರೆ.

	ಎರಡಿಲ್ಲದ ಬಾಳೆ ಪೂರ್ಣ ಕೃತಿ ಎಂಬ ಆತ್ಮಕಥನ ಪ್ರಬಂಧದಲ್ಲಿ ಅವರೇ ಹೀಗೆ ಹೇಳಿದ್ದಾರೆ: ಸಂಸ್ಕøತಿಯ ಅಂಗೋಪಾಂಗಗಳಲ್ಲಿ ಭಾಷೆಯೂ ಒಂದು ಮಹತ್ತ್ವದ ವಿಷಯ. ನಾಡಿನ ಸಂಸ್ಕøತಿಯ ಮಟ್ಟವನ್ನು ಅಲ್ಲಿಯ ಭಾಷೆಯಲ್ಲಿ ಚೆನ್ನಾಗಿ ಕಂಡುಹಿಡಿಯಬಹುದು. ಸತ್ಯವೂ ಅವ್ಯಕ್ತ: ಅದು ದೇಶಕಾಲಪರಿಸ್ಥಿತಿಗಳ ಮೇರೆಯಲ್ಲಿ ವ್ಯಕ್ತವಾದಾಗ ವ್ಯವಹಾರವಾಗುವುದು, ಇತಿಹಾಸದ ಜ್ಞಾನವಿನಲ್ಲದ ಯಾವ ನಿಜದ ವ್ಯವಹಾರದ ಜ್ಞಾನವೂ ಆಗಲಾರದು. ಏಕೆಂದರೆ ದೇಶ-ಕಾಲ-ಪರಿಸ್ಥಿತಿಗಳ ಭೂಮಿಕೆಯಲ್ಲಿ ಅವತರಿಸಿದ ಸತ್ಯವೇ ಇತಿಹಾಸ. ಸಂಸ್ಕøತಿಯೆಂಬುದು ನಡವಳಿಕೆಯ ಫಲ. ಸಾಹಿತ್ಯವೂ ಇತಿಹಾಸದ ಒಂದು ರೂಪ. ಏಕೆಂದರೆ ದೇಶ ಕಾಲ ಪರಿಸ್ಥಿತಿಯ ಸನ್ನಿವೇಶಗಳಲ್ಲಿ ಆಡಕವಾದ ಸತ್ಯವನ್ನೇ ಸಾಹಿತ್ಯವೂ ವರ್ಣಿಸುವುದು. ಇದು ಅವರ ಜೀವನಸಿದ್ಧಾಂತವಾಗಿರುವಂತೆ ಕೃತಿರಚನೆಯ ಧ್ಯೇಯವೂ ಆಗಿದೆ ಆದರೆ ಅವರ ಜೀವನಸಿದ್ಧಾಂತವಾಗಿರುವಂತೆ ಕೃತಿರಚನೆಯ ಧ್ಯೇಯವೂ ಆಗಿದೆ. ಆದರೆ ಅವರ ಸಂಶೋಧನಾ ಕ್ಷೇತ್ರವೇ ಬಹು ವಿಶಾಲವೂ ವಿಶ್ವತೋಮುಖವೂ ಆಗಿರುವಂತೆ ಇನ್ನೂ ಪ್ರಾಗೈತಿಹಾಸಿಕ ಶಾಸ್ತ್ರಗಳೇ ಶೈಶವಾವಸ್ಥೆಯಲ್ಲಿರುವುದರಿಂದ ಜೋಶಿಯವರದೇ ಕಡೆಯ ತೀರ್ಮಾನಗಳೆನ್ನುವಂತಿಲ್ಲ.
(ಕೆ.ಕೆ.)
ಪರಿಷ್ಕರಣೆ:
ಶ್ರೀ. ರಾ. ನಂ. ಚಂದ್ರಶೇಖರ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ